ದೇವಾಡಿಗ ಸಂಘ ಮುಂಬಯಿ : ಶ್ರೀ ರವಿ ಎಸ್. ದೇವಾಡಿಗರು ನೂತನ ಮತ್ತು ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ | DSM

ದೇವಾಡಿಗ ಸಂಘ ಮುಂಬಯಿ : ಶ್ರೀ ರವಿ ಎಸ್. ದೇವಾಡಿಗರು ನೂತನ ಮತ್ತು ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ

Featured Image

ನವಿ ಮುಂಬಯಿ, ಆ 26: ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ಮತ್ತು ಇತ್ತೀಚೆಗೆ ಶತಮಾನೋತ್ಸವ ಆಚರಿಸಿದ ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಶ್ರೀ ರವಿ ಎಸ್. ದೇವಾಡಿಗರು ಮೂರನೇ ಅವಧಿಗೆ ಆಯ್ಕೆಗೊಂಡಿದ್ದಾರೆ.
ಸಂಘದ 100ನೇ ವಾರ್ಷಿಕ ಮಹಾಸಭೆಯು ಆಗಸ್ಟ್ 15, 2025ರಂದು ನೆರೂಲ್ ಪಶ್ಚಿಮದಲ್ಲಿರುವ ದೇವಾಡಿಗ ಭವನದಲ್ಲಿ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸಾಂಗವಾಗಿ ನೆರವೇರಿತು. ಪ್ರತೀ ಮೂರು ವರ್ಷಕ್ಕೊಮ್ಮೆ ಸಂಘದ ನೂತನ ಸಮಿತಿಯ ಆಯ್ಕೆ ಆಗುತ್ತಿದ್ದು ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ಮೂರು ವರ್ಷದ ಅವಧಿ ಸಂಪೂರ್ಣಗೊಂಡಿದ್ದು ಅಧ್ಯಕ್ಷೀಯ ಪದಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಯಾವುದೇ ಚುನಾವಣೆಗೆ ಆಸ್ಪದ ಕೊಡದೆ ಶ್ರೀ ರವಿ ಎಸ್. ದೇವಾಡಿಗರನ್ನು ಅಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಶ್ರೀ ರವಿ ದೇವಾಡಿಗರು ಈಗಾಗಲೇ ಸಂಘದ ಅಧ್ಯಕ್ಷರಾಗಿ ತನ್ನ ಎರಡು ಅವಧಿಗಳನ್ನು ಪೂರ್ಣಗೊಳಿಸಿದ್ದು ಮುಂಬಯಿ ಸಂಘದ ಹೆಸರನ್ನು ದೇಶ ವಿದೇಶಗಳಲ್ಲಿ ಪ್ರಸಿದ್ಧಿಗೊಳಿಸಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಬಾಂಧವರಿಗೆ ಬಹಳ ಪರಿಚಯದವರಾಗಿದ್ದಾರೆ. ಅವರ ಕಳೆದ ಅವಧಿಯಲ್ಲಿ ಕೋರೋಣ ಮಹಾಮಾರಿಯ ಆತಂಕ ಇದ್ದರೂ ಮುಂಬಯಿ ಮತ್ತು ಊರಿನ ಸಮಾಜ ಬಾಂಧವರಿಗೆ ಎಲ್ಲಾ ರೀತಿಯ ಸಹಾಯ ದೊರಕಿಸಿಕೊಡುವಲ್ಲಿ ಮುಂಚೂಣಿಯಲ್ಲಿ ಇದ್ದರು. ಜೊತೆಯಲ್ಲಿ ಸಂಘದ ಮತ್ತು ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ಉತ್ತಮ ಸಮನ್ವಯತೆಯನ್ನು ಕಾಪಾಡಿಕೊಂಡು ಸಮಾಜದಲ್ಲಿ ಒಗ್ಗಟ್ಟು ನಿರ್ಮಾಣ ಮಾಡುವಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ.
ರಿಯಲ್ ಎಸ್ಟೇಟ್/ ಹೋಟೆಲ್ ಉದ್ಯಮಿಯಾದ ರವಿ ದೇವಾಡಿಗರು ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹ ಮತ್ತು ನವಿ ಮುಂಬಯಿ ನೆರೂಲ್ ಇಲ್ಲಿನ ದೇವಾಡಿಗ ಭವನ ಕಟ್ಟಡಗಳ ನೂತನಿಕರಣಗೊಳಿಸಿ ಮತ್ತು ಆಂತರಿಕ ವಿನ್ಯಾಸದಲ್ಲಿ ಅನೇಕ ಹೊಸ ಬದಲಾವಣೆಗಳನ್ನು ತಂದು ಸೌಂದರ್ಯಕರಣದಲ್ಲಿಯೂ ಬಹಳ ಹೊಸತನವನ್ನು ಬೆಸದು ಕಟ್ಟಡದ ಬಾಳಿಕೆ ಮತ್ತು ಸಂಘದ ಆದಾಯದ ಪ್ರಗತಿಗೆ ಕಾರಣರಾಗಿದ್ದಾರೆ. ಅಲ್ಲದೆ ಸಂಘದ ಶತಮಾನೋತ್ಸವ ಆಚರಣೆಯಲ್ಲಿ ಮತ್ತು ಅದರ ಯಶಸ್ಸಿಗೆ ರವಿ ದೇವಾಡಿಗರು ಬಹಳ ಶ್ರಮ ವಹಿಸಿದ್ದಾರೆ.
ವಾರ್ಷಿಕ ಮಹಾಸಭೆಯಲ್ಲಿ ಶ್ರೀ ರವಿ ಎಸ್ ದೇವಾಡಿಗರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಆಂತರಿಕ ಚುನಾವಣಾ ಅಧಿಕಾರಿಗಳಾದ ಶ್ರೀ ಹೇಮನಾಥ್ ದೇವಾಡಿಗ ಮತ್ತು ಶ್ರೀ ಕೃಷ್ಣ ಏನ್ ಶೇರಿಗಾರ್ ಘೋಷಿಸುತ್ತಲೇ ಮಹಾಸಭೆಯಲ್ಲಿ ಸೇರಿದ ಸದಸ್ಯರು ಕರತಾಳ ಬಾರಿಸಿ ಅವರನ್ನು ಸ್ವಾಗತಿಸಿದರು. ಅಲ್ಲದೆ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಪ್ರವೀಣ್ ಎನ್. ದೇವಾಡಿಗರು ಅವರಿಗೆ ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರು ಮತ್ತು ವ್ಯವಸ್ಥಾಪಕ ಮಂಡಳಿ, ಸಂಘದ ಮಾಜಿ ಅಧ್ಯಕ್ಷರುಗಳು ಮತ್ತು ಅತಿಥಿಗಳು ಸೇರಿ ಅವರನ್ನು ಅಭಿನಂದಿಸಿದರು.