ದೇವಾಡಿಗ ಸಂಘ ಮುಂಬಯಿ – ನೂರನೇ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ಸಂಪನ್ನ | DSM

ದೇವಾಡಿಗ ಸಂಘ ಮುಂಬಯಿ – ನೂರನೇ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ಸಂಪನ್ನ

Featured Image

ನವಿ ಮುಂಬಯಿ, ಆ.21:ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿಯ 100ನೇ ವಾರ್ಷಿಕ ಮಹಾಸಭೆ ನವಿ ಮುಂಬಯಿ, ನೆರೂಲ್‌ನ ದೇವಾಡಿಗ ಭವನದಲ್ಲಿ ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಜರುಗಿತು. ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರು ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಮಹಾಸಭೆಗೆ ದೊಡ್ಡ ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದರು.
ಆರಂಭದಲ್ಲಿ ಗೌ.ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಅವರು ಎಲ್ಲರಿಗೂ ಸ್ವಾಗತ ಕೋರಿ, ಗತ ವರ್ಷದ ಮಹಾಸಭೆಯ ವರದಿಯನ್ನು ಓದಿ ಮಂಡಿಸಿದರು. ನಂತರ ವ್ಯವಸ್ಥಾಪಕ ಮಂಡಳಿಯ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಲಾಯಿತು. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಯಿತು. ಎಲ್ಲ ವಿಷಯಗಳನ್ನೂ ಸಭಾಧ್ಯಕ್ಷರು ಸದಸ್ಯರ ಒಪ್ಪಿಗೆ ಪಡೆದು ಅಂಗೀಕರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಮೊಯ್ಲಿ, ಮಾಜಿ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಹಾಗೂ ಶ್ರೀ ನಿತೇಶ್ ದೇವಾಡಿಗ, ಜೊತೆಗೆ ಖಜಾಂಚಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರು ಮಾತನಾಡಿ, ನೂರನೇ ಮಹಾಸಭೆಯ ಶುಭಾಶಯವನ್ನು ಎಲ್ಲ ಸದಸ್ಯರಿಗೆ ಕೋರಿದರು. ಶತಮಾನೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಡುವಲ್ಲಿ ವ್ಯವಸ್ಥಾಪಕ ಮಂಡಳಿ, ಉಪಸಮಿತಿಗಳು ಮತ್ತು ಪ್ರಾದೇಶಿಕ ಸಮಿತಿಗಳು ತೋರಿದ ಶ್ರಮಕ್ಕೆ ಅಭಿನಂದನೆ ಹಾಗೂ ಧನ್ಯವಾದ ಸಲ್ಲಿಸಿದರು. ಸದಸ್ಯರು ಮಂಡಿಸಿದ ವಿಷಯಗಳಿಗೆ ಸಮರ್ಪಕ ಸ್ಪಷ್ಟೀಕರಣ ನೀಡಿದರು.
ಅವರು ಮುಂದುವರಿಸಿ “ಸಂಘವು ತನ್ನ ಉದ್ದೇಶಗಳನ್ನು ಸಾಧಿಸುತ್ತಾ ಬಂದಿದೆ. ಸದಸ್ಯರಿಂದ ಬಂದ ಆರೋಗ್ಯ, ಶಿಕ್ಷಣ ಹಾಗೂ ಮಕ್ಕಳಿಗೆ ಆರ್ಥಿಕ ಸಹಾಯ ಸಂಬಂಧಿತ ಅರ್ಜಿಗಳನ್ನು ಪರಿಶೀಲಿಸಿ ಸಮರ್ಪಕ ನೆರವು ನೀಡಲಾಗಿದೆ. ಇತರ ಕಾರ್ಯಕ್ರಮಗಳನ್ನೂ ಕಾಲಕಾಲಕ್ಕೆ ಯಶಸ್ವಿಯಾಗಿ ನಡೆಸಲಾಗಿದೆ. ಆದರೆ ಸಂಘವು ತನ್ನ ಮಿತಿಯನ್ನು ಮೀರಲು ಸಾಧ್ಯವಿಲ್ಲ,” ಎಂದರು.
ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸಂಘವು ಹಲವಾರು ಪ್ರಯತ್ನ ಮತ್ತು ಸಂಶೋಧನೆ ಮಾಡಿದರೂ, ಭೂಮಿ ಮತ್ತು ಕಟ್ಟಡ ವೆಚ್ಚದ ಹಿನ್ನೆಲೆ ಸದ್ಯಕ್ಕೆ ಅದನ್ನು ನಡೆಸುವುದು ಕಷ್ಟಕರವೆಂದರು. ಸಂಘದ ದೇವಾಡಿಗ ಭವನವನ್ನು ಭದ್ರಗೊಳಿಸಲಾಗಿದ್ದು, ದಾದರ್ ಪೂರ್ವದಲ್ಲಿನ ಕಾರ್ಯಾಲಯ ಕಟ್ಟಡ ಪುನರ್ನಿರ್ಮಾಣ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ FSI ಪಡೆದು, ಅಗತ್ಯವಿದ್ದರೆ ವಿಸ್ತಾರವಾದ ವಾಸ್ತು ನಿರ್ಮಾಣ ಮತ್ತು ವಾಹನ ನಿಲುಗಡೆ ವ್ಯವಸ್ಥೆಯ ಯೋಜನೆ ಇದೆ ಎಂದರು.
ನವಿ ಮುಂಬಯಿ ವಲಯವು ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರ ಮಕ್ಕಳನ್ನು ಶಿಕ್ಷಣಕ್ಕಾಗಿ ದತ್ತು ಪಡೆಯುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಇತರ ವಲಯಗಳೂ ಇಂತಹ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು, ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು. ಸಂಘಕ್ಕೆ ತಮ್ಮಿಂದಾದ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವ್ಯವಸ್ಥಾಪಕ ಮಂಡಳಿಗೆ ಶುಭಾಶಯ ಕೋರಿದರು.
ಮಹಾಸಭೆಗೆ ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ, ಶ್ರೀ ಹೆಚ್. ಮೋಹನದಾಸ್, ಶ್ರೀ ಕೆ.ಕೆ. ನಂದಾ ಹಾಗೂ ಹಿರಿಯ ಸದಸ್ಯರಾದ ಶ್ರೀ ಶಂಕರ್ ಮೊಯ್ಲಿ, ಶ್ರೀ ಎಂ ಪಿ ಕೆರ್ಗಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಜೊತೆ ಕಾರ್ಯದರ್ಶಿ ಶ್ರೀ ಪ್ರಭಾಕರ್ ಎಸ್. ದೇವಾಡಿಗ ವಂದನಾರ್ಪಣೆ ಸಲ್ಲಿಸಿದರು.