Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ಮಹಿಳಾ ವಿಭಾಗದಿಂದ ಹರಸಿನ ಕುಂಕುಮ ಕಾರ್ಯಕ್ರಮ ನಮ್ಮ ಗುರಿ ತಲುಪಲು ನಾವೆಲ್ಲಾ ಒಂದಾಗಿ ದುಡಿಯಬೇಕು - ಧರ್ಮಪಾಲ ದೇವಾಡಿಗ

ದೇವಾಡಿಗ ಸಂಘ ಮುಂಬಯಿ : ಮಹಿಳಾ ವಿಭಾಗದಿಂದ ಹರಸಿನ ಕುಂಕುಮ ಕಾರ್ಯಕ್ರಮ

ನಮ್ಮ ಗುರಿ ತಲುಪಲು ನಾವೆಲ್ಲಾ ಒಂದಾಗಿ ದುಡಿಯಬೇಕು - ಧರ್ಮಪಾಲ ದೇವಾಡಿಗ

   ನವಿ ಮುಂಬಯಿ : ಸ್ತ್ರೀಯರು ಲಕ್ಷ್ಮೀ ಸಂಭೂತರು. ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ಮನೆಯಲ್ಲಿ ಸದಾ ಹಸನ್ಮುಖಿಯಾಗಿದ್ದು ಸಂತೋಷದಿಂದಿದ್ದರೆ ಆ ಮನೆಗೆ ಸದಾ ಲಕ್ಷ್ಮೀ ಒಲಿದು ಬರುತ್ತಾಳೆ. ದೇವಾಡಿಗ ಸಮಾಜವು ಕೆಲವು ಇತರ ಸಮಾಜಗಳಂತೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಬಲವಾಗಿರದಿದ್ದರೂ ಸಂಸ್ಕ್ರತಿ, ಸತ್ಯ ಧರ್ಮದ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸಂಘದ ಒಳಿತಿಗಾಗಿ ಅಲ್ಲದೆ ನಮ್ಮ ನಮ್ಮ ಯಾವುದೇ ಗುರಿತಲುಪಲೂ ಎಲ್ಲರೂ ಒಗ್ಗಟಾಗಿ ಬಾಳಬೇಕು ಎಂಬುದಾಗಿ ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರು ಹಾಗೂ ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಹೇಳಿದರು.

ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಹರಿಶಿನ-ಕುಂಕುಮ ಮತ್ತು ಗೌರವ ಪ್ರಧಾನ ಕಾರ್ಯಕ್ರಮವು ಇಂದು ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇದ್ರವಾದ ದೇವಾಡಿಗ ಭವವನ ನೆರೂಲ್ ನವಿ ಮುಂಬಯಿ ಇಲ್ಲಿ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ಧರ್ಮಪಾಲ ದೇವಾಡಿಗರನ್ನು ಗೌರವಿಸಿದರು. ಗೌರವಕ್ಕೆ ಉತ್ತರಿಸಿ ಮಾತನಾಡಿದ ಶ್ರೀ ದೇವಾಡಿಗರು ಸಮಾಜ ಬಾಂಧವರು ವಿಶೇಷೇಶವಾಗಿ ಮಹಿಳಾ ವಿಭಾಗದ ಸದಸ್ಯರನ್ನು ಉದ್ದೇಶಿಸಿ ಮೇಲಿನ ಮಾತುಗಳನ್ನು ಆಡಿದರು.

ತನ್ನ ಮಾತುಗಳನ್ನು ಮುಂದುವರಿಸಿದ ಶ್ರೀ ದೇವಾಡಿಗರು, ಮಹಿಳಾ ವಿಭಾಗವು ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ಕಾರ್ಯಗಳನ್ನು ಶ್ಲಾಘಿಸಿ ಶ್ರೀಮತಿ ಜಯಂತಿ ದೇವಾಡಿಗರು ಓರ್ವ ಕ್ರೀಡಾ ಸಾಧಕರಾಗಿದ್ದು ಸಮಾಜದಲ್ಲಿ ಅವರನ್ನು ಗುರುತಿಸಿ ಮಾನ ಸನ್ಮಾನ ನೀಡುತ್ತಿದ್ದಾರೆ. ಸಮಾಜದ ಯಾವುದೇ ವ್ಯಕ್ತಿಗಳಿಗೆ ನೀಡುವ ಮಾನ ಸನ್ಮಾನ ಇದು ಸಂಪೂರ್ಣ ಸಮಾಜಕ್ಕೆ ದೊರೆಯುವ ಗೌವರವಾಗಿದೆ. ಹಾಗಾಗಿ ನಾವು ಬೇರೊಂದು ಸಮಾಜದೊಂದಿಗೆ ಬೆರೆತು ಇರುವಾಗ ಬಹಳ ಜಾಗರೂಕರಾಗಿದ್ದು ಯಾವುದೇ ಪರಿಸ್ಥಿಯಲ್ಲಿಯೂ ತಪ್ಪು ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ನಾವು ಬಹಳ ಭಾಗ್ಯಶಾಲಿಗಳು. ನಮ್ಮ ಪೂರ್ವಜರು ಅಂದು ಕಠಿಣ ಪರಿಸ್ಥಿತಿಯಲ್ಲಿಯೂ ನಮ್ಮ ಸಮಾಜ ಕಟ್ಟಿದರು. ಬಳಿಕ ನಂತರದವರು ಅದನ್ನು ಉತ್ತಮವಾಗಿ ಬೆಳಿಸಿಕೊಂಡು ಬಂದಿದ್ದಾರೆ. ಯಾವುದೇ ಕಾರ್ಯಕ್ರಮ ಆರಂಭವಾಗುವ ಮೊದಲು ಶ್ರೀ ರಾಮದೇವರ ಫೋಟೋ ಇತ್ತು ಅದನ್ನು ಪೂಜಿಸಿ ಮುಂದಿನ ಕಾರ್ಯಕ್ರಮ ಮಾಡುತ್ತಿದ್ದರು . ಅಂದು ಹುಟ್ಟುಹಾಕಿದ ನಮ್ಮ ಸಂಘ ಈಗ ಶತಮಾನೋತ್ಸವ ಆಚರಣೆಯ ತಯಾರಿಯಲ್ಲಿದೆ. ಅಧ್ಯಕ್ಷ ಪ್ರವೀಣ್ ದೇವಾಡಿಗ ಇವರ ನೇತೃತ್ವದಲ್ಲಿ ಸಂಘವನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನಾವೆಲ್ಲಾ ಒಂದಾಗಿ ಒಗ್ಗಟ್ಟಿನಿಂದಿದ್ದು ಬಹಳ ವಿಜೃಂಭಣೆಯ ಮತ್ತು ಶತಮಾನೋತ್ಸವ ಆಚರಿಸೋಣ, ನನ್ನ ಸಂಪೂರ್ಣ ಬೆಂಬಲ ಇದೆ; ಎಂದು ಶ್ರೀ ಧರ್ಮಪಾಲ ದೇವಾಡಿಗ ಹೇಳಿದರು.

ಈ ಕಾರ್ಯಕ್ರಮದಲ್ಲಿ ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ತನ್ನ ಗೌರವಕ್ಕೆ ಉತ್ತರಿಸುತ್ತಾ ಸಂಘದ ಮಹಿಳಾ ವಿಭಾಗವನ್ನು ಅಭಿನಂದಿಸಿದರು. ಅಲ್ಲದೆ ಶ್ರೀ ಧರ್ಮಪಾಲ ದೇವಾಡಿಗರನ್ನೂ ಅಭಿನಂದಿಸಿ ಸಂಘದ ಶತಮಾನೋತ್ಸವದ ಆಚರಣೆಗೆ ಅವರ ಸಂಪೂರ್ಣ ಸಹಕಾರ ಬೇಕು ಎಂದು ಹೇಳಿದರು. ಸಂಘದ ಈಗಿನ ಮುಖ್ಯ ಉದ್ದೇಶ ಶತಮಾನೋತ್ಸವ ಆಚರಣೆ. ಅದಕ್ಕೆ ನಮ್ಮಲ್ಲಿ ಒಗ್ಗಟ್ಟು ಮತ್ತು ತಾಳ್ಮೆ ಬೇಕು. ನಮ್ಮ ಸಮಾಜವನ್ನು ಪ್ರಪಂಚಕ್ಕೆ ಕಾಣಿಸಲು ಇದು ಒಂದು ಅವಕಾಶ. ಅದರಲ್ಲಿ ನಾವು ಯಶಸ್ವಿಯಾಗಬೇಕು. ನಾವು ಹೇಗಿದ್ದರೂ ಹೊರಪ್ರಪಂಚಕ್ಕೆ ನಾವು ಒಂದಾಗಿ ಕಾಣಿಸಬೇಕು. ನಮ್ಮ ಗುರಿ ತಲುಪಲು ಸಂಘದ ಎಲ್ಲಾ ಸದಸ್ಯರು ಒಂದಾಗಿ ಕೆಲಸ ಮಾಡೋಣ; ಎಂದು ಹೇಳುತ್ತಾ ಹರಸಿನ ಕುಂಕುಮ ಕಾರ್ಯಕ್ರಮಕ್ಕೆ ಅವರು ಶುಭ ಕೋರಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ ಇವರು ತನಗೆ ಈ ಅವಕಾಶಕ್ಕಾಗಿ ಧನ್ಯವಾದ ನೀಡುತ್ತಾ ಸಂಘದ ಎಲ್ಲಾ ಕಾರ್ಯಗಳಿಗೆ ತನ್ನ ಪೂರ್ಣ ಸಹಕಾರ ಇದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀಮತಿ ಪ್ರಫುಲ್ಲಾ ವಾಸು ದೇವಾಡಿಗ ಇವರು ಮಾತನಾಡುತ್ತಾ, ಸಂಘದ ಎಲ್ಲಾ ಮಹಿಳೆಯರಿಗೆ ಶುಭ ಕೋರಿದರು. ತಾನು ಸಂಘದಲ್ಲಿ ಸುಮಾರು ನಲವತ್ತು ವರ್ಷಗಳಿಂದ ಹೊಂದಿಕೊಂಡಿದ್ದು, ಈಗ ಅಂದಿನ ದಿನಗಳಂತೆ ಇಲ್ಲ, ಸಂಘ ತುಂಬಾ ಬೆಳೆದಿದೆ. ಮಹಿಳೆಯರು ಮುಂದೆ ಬಂದು ಒಳ್ಳೆ ಒಳ್ಳೆ ಕಾರ್ಯಕ್ರಮ ನೀಡುತ್ತಿದ್ದಾರೆ. ಸಮಾಜ ಉತ್ತಮ ಸಾಧನೆ ಮಾಡಿದೆ ಎನ್ನುವುದಕ್ಕೆ ನೆರೂಲ್ ಇಲ್ಲಿಯ ಭವ್ಯ ದೇವಾಡಿಗ ಸಮಾಜ ಭವನ, ಬಾರಕೂರಿನ ದೇವಾಡಿಗ ಸಮಾಜದ ಮುಂದಾಳುತ್ವದಲ್ಲಿ ಕಟ್ಟಿಸಲಾದ ಶ್ರೀ ಏಕನಾಥೇಶ್ವರಿ ಶಿಲಾಮಯ ದೇವಾಲಯ, ಪೊಳಲಿ ರಾಜರಾಜೇಶ್ವರಿ ದೇವಾಲಯಕ್ಕೆ ಸಮಾಜದ ಸಷ್ಠಿರಥ ಸಮರ್ಪಣೆ ಮೊದಲಾದ ಕಾರ್ಯ ಸಾಕ್ಷಿಯಾಗಿದೆ. ಹಾಗೆಯೇ ಈಗ ಸಂಘದ ಶತಮಾನೋತ್ಸವವೂ ಬಹಳ ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗಿದೆ. ಅದು ಎಲ್ಲರ ಸಹಾಯದಿಂದ ಖಂಡಿತ ಯಶಸ್ವಿಯಾಗಲಿ ಎಂದು ಹರಸಿದರು.

ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡುತ್ತಾ ಮಹಿಳಾ ವಿಭಾಗಕ್ಕೆ ಶುಭ ಕೋರಿದರು. ಮಹಿಳಾ ಸಶಕ್ತೀಕರಣದ ಕುರಿತು ತನ್ನ ಅನಿಸಿಕೆಯನ್ನು ನೀಡುತ್ತಾ, ಸಂಘದ ಇತಿಹಾಸದಲ್ಲಿ ಮೊದಲಬಾರಿಗೆ ಮಹಿಳಾ ಉಪಾಧ್ಯಕ್ಷೆ ಇದ್ದು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷೆಯಾಗಿಯೂ ಮಹಿಳೆಯರು ಚುನಾಯಿತರಾಗಿದ್ದಾರೆ ಅಲ್ಲದೆ ಸಂಘದ ಸಮಿತಿಸದಸ್ಯರಲ್ಲಿ ಶೇಕಡಾ ಅರವತ್ತರಷ್ಟು ಮಹಿಳಾ ಸದಸ್ಯರಿದ್ದು ಅವರಿಂದ ಉತ್ತಮ ಚಟುವಟಿಕೆಗಳು ನಡೆಯುತ್ತಿವೆ ಎಂದರು. ಅಲ್ಲದೆ ಯುವಕರೂ ಸಹ ಸಾಕಷ್ಟು ಪ್ರಮಾಣದಲ್ಲಿದ್ದು ಇದರಿಂದಾಗಿ ಸಂಘದ ಶತಮಾನೋತ್ಸವಕ್ಕೆ ಒಂದು ಬಲ ಬಂದಿದೆ ಎಂದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯಿಲಿ ಇವರೂ ತನ್ನ ಅನಿಸಿಕೆಯನ್ನು ಮಂಡಿಸಿದರು. ಮಹಿಳಾ ವಿಭಾಗದ ಶ್ರೀಮತಿ ಜಯಂತಿ ಎಂ. ದೇವಾಡಿಗ ಎಲ್ಲರನ್ನೂ ಸ್ವಾಗತಿಸುತ್ತಾ ವಿಭಾಗದ ಎಲ್ಲ ಸದಸ್ಯರು, ಸಂಘದ ಅಧ್ಯಕ್ಷರು, ವ್ಯವಸ್ಥಾಪಕ ಮಂಡಳಿ, ಮಾಜಿ

ಅಧ್ಯಕ್ಷರುಗಳು ವಿಶೇಷವಾಗಿ ಶ್ರೀ ಧರ್ಮಪಾಲ ದೇವಾಡಿಗ ಮತ್ತು ಅವರ ಧರ್ಮಪತ್ನಿ ಸುಜಾತ ದೇವಾಡಿಗ, ಸಂಘದ ಮಹಿಳಾ ವಿಭಾಗದ ಎಲ್ಲಾ ಮಾಜಿ ಕಾರ್ಯಾಧ್ಯಕ್ಷರುಗಳು ಇವರಿಗೆ ಸಹಕಾರಕ್ಕಾಗಿ ಧನ್ಯವಾದ ನೀಡಿದರು. ಆಮೇಲೆ ಎಲ್ಲ ಅತಿಥಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳ ಹಸ್ತದಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಸಿಟಿ ವಲಯದ ಸದಸ್ಯೆ ಶ್ರೀಮತಿ ಸುಶೀಲಾ ದೇವಾಡಿಗ ಇವರು ಸ್ವಾಗತ ಗೀತೆ ಹಾಡಿದರು. ಭೋಜನ ವಿರಾಮದ ನಂತರ ಸಂಘದ ಪ್ರಾದೇಶಿಕ ಸಮಿತಿಗಳಿಂದ; ಭಾರತನ್ರತ್ಯ; ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಹತ್ತು ಪ್ರಾದೇಶಿಕ ಸಮಿತಿಗಳು ಹತ್ತು ರಾಜ್ಯಗಳನ್ನು ಪ್ರತಿನಿಧಿಸುವ ನ್ರತ್ಯ ಸಾದರ ಪಡಿಸಿದರು. ಅಲ್ಲದೆ ಯುವ ಕಾರ್ಯದ್ಧ್ಯಕ್ಷೆ ಕುಮಾರಿ ತನ್ವಿ ದೇವಾಡಿಗ ಮತ್ತು ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗ ಇವರ ಮುಂದಾಳುತ್ವದಲ್ಲಿ ಮತ್ತು ನಿರ್ದೇಶನದಲ್ಲಿ ಸಂಘದ ಹತ್ತು ಪ್ರಾದೇಶಿಕ ಸಮಿತಿ ಸದಸ್ಯರಿಂದ ದಶಾವತಾರ ಎನ್ನುವ ರೂಪಕವನ್ನು ಸಾದರಪಡಿಸಿದರು. ಇದರಲ್ಲಿ ಪ್ರತಿ ಒಂದೊಂದು ಪ್ರಾದೇಶಿಕ ಸಮಿತಿಗಳು ಒಂದೊಂದು ವಿಷ್ಣುವಿನ ಅವತಾರಾವನ್ನು ನಾಟಕೀಯವಾಗಿ ನಟಿಸಿ ತೋರಿಸಿದರು. ಸದಸ್ಯರ ಮಕ್ಕಳೂ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಬಳಿಕ ನಡೆದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳಾ ಸದಸ್ಯರು ಪಾಲ್ಗೊಂಡರು.

ಶ್ರೀಮತಿ ಪ್ರಮೀಳಾ ಶೇರಿಗಾರ ಇವರು (ಆಕ್ಟೋಬರ್ 2022 ರಿಂದ ಡಿಸೆಂಬರ್ 2023 ರ ಕಾಲಾವಧಿಯಲ್ಲಿ) ಮಹಿಳಾ ವಿಭಾಗದವರಿಂದ ಏರ್ಪಡಿಸಲಾಗಿದ್ದ ವಿವಿಧ ಕಾರ್ಯಕ್ರಮಗಳು ಹಾಗೂ ಮಹಿಳೆಯರ ಪ್ರತಿಭೆಯನ್ನು ಜಾಗ್ರತ ಗೊಳಿಸಲು ಆಯೋಜಿಸಿದ ವಿವಿಧ ಸ್ಪರ್ದೆಗಳ ಮಾಹಿತಿಯನ್ನು ತಿಳಿಸಿ , ಇನ್ನೂ ಮುಂದಿನ ಇಂತಹ ಕಾರ್ಯಕ್ರಮಗಳಲ್ಲಿ ಮಹಿಳಾ ಸದಸ್ಯರು ಹೆಚ್ಚಿನ ಸಂಖೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳು ವಿನಂತಿಸಿದರು.

ವೇದಿಕೆಯಲ್ಲಿ ಅತಿಥಿಗಳಾದ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಶ್ರೀಮತಿ ಪ್ರಫುಲ್ಲಾ ವಾಸು ದೇವಾಡಿಗ ಇವರೊಂದಿಗೆ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಶ್ರೀಮತಿ ಜಯಂತಿ ದೇವಾಡಿಗ, ಶ್ರೀಮತಿ ಪ್ರಮೀಳಾ ಶೇರಿಗಾರ, ಶ್ರೀಮತಿ ಸುಜಯ ದೇವಾಡಿಗ, ಶ್ರೀಮತಿ ಲತಾ ಶೇರಿಗಾರ, ಶ್ರೀಮತಿ ನಳಿನಿ ದೇವಾಡಿಗ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಶ್ರೀಮತಿ ಮಾಲತಿ ಜೆ.ಮೊಯಿಲಿ, ಶ್ರೀಮತಿ ಸುರೇಖಾ ದೇವಾಡಿಗ, ಶ್ರೀಮತಿ ಪೂರ್ಣಿಮಾ ದೇವಾಡಿಗ, ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ಶುಭ ದೇವಾಡಿಗ ಇವರೂ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ನಳಿನಿ ದೇವಾಡಿಗ ಇವರು ವಂದನಾರ್ಪಣೆಗೈದರು.