ದೇವಾಡಿಗ ಸಂಘ ಮುಂಬಯಿ : ದೇವಾಡಿಗ ಭವನ ನೇರುಲ್ ಇಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ದೇವಾಡಿಗ ಸಂಘ ಮುಂಬಯಿ : ದೇವಾಡಿಗ ಭವನ ನೇರುಲ್ ಇಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ರಾಷ್ಟ್ರದ ಬೆಳವಣಿಗೆಯ ಪ್ರಾರಂಭ ತಮ್ಮ ತಮ್ಮ ಮನೆಯಿಂದ: ನರೇಶ್ ದೇವಾಡಿಗ

ನವಿ ಮುಂಬಯಿ - ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಹಿತಾಶಕ್ತಿ ಎಲ್ಲವೂ ನಮ್ಮ ನಮ್ಮ ಮನೆಗಳೆಯಿಂದಲೇ ಪ್ರಾರಂಭಗೊಳ್ಳುತ್ತದೆ. ಮನೆಯಲ್ಲಿ, ಸಮಾಜದಲ್ಲಿ ಪ್ರಾರಂಭಗೊಂಡ ಒಮ್ಮತ, ಒಗ್ಗಟ್ಟು, ಬೆಳವಣಿಗೆ ಮುಂದುವರೆದು ದೇಶದ ಭದ್ರತೆಗೆ ನೆರವಾಗುವುದು. ಅದಕ್ಕಾಗಿ ನಾವು ನಮ್ಮ ಮನೆ, ಕೇರಿ, ಸಮಾಜಗಳಿಂದಲೇ ದೇಶದ ಬೆಳವಣಿಗೆ, ದೇಶದ ಸಂರಕ್ಷಣೆ ಮತ್ತು ದೇಶದ ಪ್ರಗತಿಯ ಬಗ್ಗೆ ಚಿಂತನವನ್ನು ಮುಂದುವರಿಸುತ್ತಿರಬೇಕು, ಎಂದು ದೇವಾಡಿಗ ಸಂಘ ಮುಂಬಯಿ ಇದರ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗರು ಹೇಳಿದರು. ಇಲ್ಲಿ ನಡೆದ ಭಾರತದ 75ನೇ ಸ್ವಾತಂತ್ರೋತ್ಸವದ ಆಚರಣೆಯ ಸಂದರ್ಭ ದೇಶದ ತಿರಂಗ ಬಾವುಟವನ್ನು ಹಾರಿಸಿದ ಶ್ರೀ ನರೇಶ್ ದೇವಾಡಿಗರು, ದೇವಾಡಿಗ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ ವೀರರು ಮತ್ತು ಸ್ವಾತಂತ್ರ ಹೋರಾಟದ ಮುಂದಾಳುಗಳು ಮತ್ತು ಸ್ವಾತಂತ್ರ ಹೋರಾಟ ಮಾಡಿದವರನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿಯನ್ನು ಅವರು ನೀಡಿದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಪಿ. ಕರ್ಮರನ್ ಮಾತನಾಡಿ, ಭಾರತದಲ್ಲಿ ಇಂದು ನಾವು ಶಾಂತಿಯುತವಾಗಿ ಬಾಳಲು ಕಾರಣ ನಮಗೆ ದೊರಕಿದ ಸ್ವಾತಂತ್ರ್ಯ ,ಈ ಸ್ವಾತಂತ್ರ್ಯ ಪಡೆಯಲ್ಲೂ ಅದೆಷ್ಟೋ ವೀರಾಧಿವೀರರು ಹೋರಾಟ ನಡೆಸಿದ ಕಾರಣ ಈಗ ನಾವು ಯಾವುದೇ ಚಿಂತೆ ಇಲ್ಲದೆ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ. ಅವರ ಬಲಿದಾನದಿಂದ ಬಂದಂತಹ ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಅದನ್ನು ಪ್ರಬಲವಾಗಿಸುವಲ್ಲಿ ಭಾರತದ ಪ್ರತಿ ಪ್ರಜೆಗಳು ದುಡಿಯಬೇಕಾಗಿದೆ. ನಮ್ಮ ಮನೆಯಲ್ಲಿ, ಸಮಾಜದಲ್ಲಿ ನಾವು ಒಗ್ಗಟ್ಟಿನಿಂದ ಬಾಳಿ ಬದುಕಿದರೆ ಅದೇ ದೇಶದ ಉನ್ನತಿಗೆ ಸಾಧನ ಎಂದು ಅವರು ಹೇಳಿದರು.

ಸಂಘದ ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ ಮಾತನಾಡುತ್ತಾ, ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು. ಸಂಘ ಬೆಳೆಯಲು ಕಾರಣವಾದ ಎಲ್ಲ ಭಾಂಧವರಿಗೆ ಸಂಘದ ಪರವಾಗಿ ಎಲ್ಲರಿಗೂ ಧನ್ಯವಾದವನ್ನು ನೀಡುತ್ತಾ, ಸಂಘದ ಒಳ್ಳೆಯದಕ್ಕಾಗಿ, ಸಂಘದ ಬೆಳೆವಣಿಗೆಗಾಗಿ ಎಲ್ಲರೂ ಮುಂದೆ ಬಂದು ಒಮ್ಮತದಿಂದ ಕೆಲಸ ಮಾಡಿದರೆ ಅದೇ ನಿಜವಾದ ಸಮಾಜಸೇವೆ ಮತ್ತು ದೇಶಸೇವೆ ಎಂದು ಹೇಳಿದರು.

ಪ್ರಾರಂಭದಲ್ಲಿ ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಇವರು ಎಲ್ಲರನ್ನು ಸ್ವಾಗತಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಎಲ್ಲರನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ನೀಡುತ್ತಾ ರಾಷ್ಟ್ರಪ್ರೇಮ , ಬಾಂಧತ್ವ ಬೆಳೆಸುತ್ತಾ ಭಾರತ ಒಂದು ಬಲಿಷ್ಠ ರಾಷ್ಟ್ರವಾಗುವಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಕೋಶಾಧಿಕಾರಿ ಶ್ರೀ ದಯಾನಂದ ದೇವಾಡಿಗ, ಹಿರಿಯ ಸದಸ್ಯ ಶ್ರೀ ಚಂದ್ರಶೇಖರ್ ದೇವಾಡಿಗ, ಸಂಘದ ಸ್ಥಳೀಯ ಸದಸ್ಯರಾದ ಶ್ರೀ ಭೋಜ ದೇವಾಡಿಗ, ಮಹಿಳಾ ಸದಸ್ಯರಾದ ಶ್ರೀಮತಿ ಸುನಂದಾ ಕರ್ಮರನ್, ಶ್ರೀಮತಿ ಧನವತಿ ದೇವಾಡಿಗ, ಶ್ರೀಮತಿ ಶಾಂತ ಪಿ. ದೇವಾಡಿಗ, ಶ್ರೀಮತಿ ಶಾಂತ ಎಸ್. ದೇವಾಡಿಗ, ಶ್ರೀಮತಿ ಆಶಾ ದೇವಾಡಿಗ, ಕುಮಾರಿ ವೈಷ್ಣವಿ ಏನ್. ದೇವಾಡಿಗ, ಕುಮಾರಿ ತನ್ವಿ ಡಿ. ದೇವಾಡಿಗ, ಕುಮಾರಿ ಸ್ವಾತಿ ದೇವಾಡಿಗ, ಶ್ರೀಮತಿ ವಿಮಲ ದೇವಾಡಿಗ, ಮಾಸ್ಟರ್ ಧನುಷ್ ಏನ್. ದೇವಾಡಿಗ, ಮಾಸ್ಟರ್ ರೋಹನ್ ಡಿ. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಧ್ವಜದ ನಮನದೊಂದಿಗೆ, ರಾಷ್ಟ್ರಗೀತೆ ಜನ ಗಣ ಮನ ದಿಂದ ಪ್ರಾರಂಭಗೊಂಡು ರಾಷ್ಟ್ರಗಾನ, ವಂದೇ ಮಾತರಂ ಮತ್ತು ಜಯಘೋಷಗಳಿಂದ ಕೊನೆಗೊಂಡಿತು. ಎಲ್ಲರಿಗೂ ಸಿಹಿ ಹಂಚಲಾಯಿತು.